ಪೆಟ್ಯೂನಿಯ
ಸೋಲನೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ.  ಕೆಂಪು, ಹಳದಿ, ನೀಲಿ, ನೇರಳೆ, ಬಿಳಿ ಮುಂತಾದ ವೈವಿಧ್ಯಮಯ ಬಣ್ಣಗಳ ಆಕರ್ಷಕ ಹೂಗಳಿಂದಾಗಿ ಇದು ಜನಪ್ರಿಯವಾಗಿದೆ.  ಮೂಲತಃ ದಕ್ಷಿಣ ಅಮೆರಿಕದ ಬ್ರಜಿಲ್ ಮತ್ತು ಅರ್ಜಂಟೀನಗಳ ಸಸ್ಯವಾದ ಇದರಲ್ಲಿ 14 ಬಗೆಗಳಿವೆ. 

ಇದು 20-45 ಸೆಂ.ಮೀ. ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಸಸ್ಯ.  ಹೂಗಳು ಆಲಿಕೆಯಾಕಾರದವು.  ಪ್ರತಿ ಹೂವಿನಲ್ಲಿ 5 ಪುಷ್ಪ ಪತ್ರಗಳು, 5 ದಳಗಳು, 5 ಕೇಸರಗಳು ಹಾಗೂ ಎರಡು ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇವೆ.

ಬೆಳೆಯುವ ರೀತಿಯನ್ನು ಆಧರಿಸಿ ಪೆಟ್ಯೂನಿಯವನ್ನು 2 ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು.  ಒಂದು ಪೊದೆಯ ರೂಪದಲ್ಲಿ ಬೆಳೆಯುವ ಗುಂಪು ಮತ್ತೊಂದು ಹರಡಿಕೊಂಡು ಬೆಳೆಯುವ ಗುಂಪು.

ಪೆಟ್ಯೂನಿಯ ಬೇಸಗೆಯಲ್ಲಿ ಹೂ ಬಿಡುತ್ತದೆ; ಚಳಿ ಮತ್ತು ಮಳೆಯನ್ನು ತಡೆದುಕೊಳ್ಳಲಾರದು.  ಇದನ್ನು ಬೀಜಗಳ ಮೂಲಕವೂ ಕಾಂಡ ತುಂಡುಗಳ ಮೂಲಕವೂ ಬೆಳೆಸಬಹುದು.
(ಎ.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ